ಗೌವರ್, ಜಾನ್ -
ಸು. 1330 - 1408. ಐರೋಪ್ಯ ಮಧ್ಯಯುಗದ ಆಂಗ್ಲ ಕವಿಗಳಲ್ಲಿ, ಅನಾಮಿಕರನ್ನು ಬಿಟ್ಟರೆ ಪ್ರಸಿದ್ಧರಾದ ನಾಲ್ಕು ಕವಿಗಳಲ್ಲೊಬ್ಬ. ಉಳಿದವರು ಚಾಸರ್, ಲಿಡ್ಗೇಟ್ ಮತ್ತು ಲ್ಯಾಂಗ್ಲೆಂಡ್.

	ಗೌವರನ ಜೀವನದ ಬಗ್ಗೆ ಖಚಿತವಾಗಿ ಗೊತ್ತಿರುವ ವಿವರಗಳು ಹೆಚ್ಚಿಲ್ಲ. ಈತ ಕೆಂಟ್ ಎಂಬಲ್ಲಿ ಹುಟ್ಟಿದ. ಹಳ್ಳಿಯ ವತನದಾರನೋ ವರ್ತಕನೋ ಆಗಿ ಬದುಕು ನಡೆಸಿದ್ದಿರಬೇಕೆಂಬುದು ಈಚಿನ ಅಭಿಪ್ರಾಯ. ಸಾಕಷ್ಟು ಅನುಕೂಲ ಸ್ಥಿತಿಯಲ್ಲಿಯೇ ಬಾಳಿದ್ದಿರಬೇಕು. ಧರ್ಮ ಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡುತ್ತಿದ್ದ. ವಿರಾಗಿಯಾಗಬೇಕಿದ್ದ ಎಪ್ಪತ್ತರ ಮುಪ್ಪಿನಲ್ಲಿ ಅಗ್ನೆಸ್ ಗ್ರೌಂಡೊಲ್ಫ್ ಎಂಬುವಳನ್ನು ಮದುವೆಯಾದ. ಅನಂತರ ಮೂರು ವರ್ಷಗಳಲ್ಲಿಯೇ ಕುರುಡನಾಗಿ, ಅದಾದ ಏಳು ವರ್ಷಗಳಿಗೆ ಗತಿಸಿದ. ಮುಂಚೆಯೇ ಒಂದು ಮದುವೆಯಾಗಿದ್ದ ಮುಪ್ಪಿನಲ್ಲಾದದ್ದು ಎರಡನೆಯ ಮದುವೆ ಎಂಬ ಊಹೆಯೂ ಇದೆ.

	ಜಾನ್ ಗೌವರ್, ವಾಕ್ಸ್ ಕ್ಲೆಮ್ಯಾಂಟಿಸ್ ಎಂಬ ಲ್ಯಾಟಿನ್ ಕಾವ್ಯದ ಹಸ್ತ ಪ್ರತಿಯೊಂದರಲ್ಲಿನ ಕಿರುಚಿತ್ರ. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮಿನಲ್ಲಿದೆ.

	ಚಾಸರ್ ಮತ್ತು ಗೌವರ್ ತುಂಬ ಸ್ನೇಹದಿಂದಿದ್ದುದು ಕಂಡುಬರುತ್ತದೆ. ಚಾಸರ್ ಒಮ್ಮೆ ಪರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಇವನನ್ನು ತನ್ನ ಆಸ್ತಿಗೆ ಅಧಿಕಾರಿಯನ್ನಾಗಿ ನಿಯಮಿಸಿದ್ದುದುಂಟು. ಚಾಸರ್ ತನ್ನ ಟ್ರಾಯಿಲಸ್ ಮತ್ತು ಕ್ರಿಸಿಡೆ ಎಂಬ ಕಥೇಯ ಮುಮ್ಮಾತಿನಲ್ಲಿ ಗೌವರ್‍ನನ್ನು ನೀತಿಶಾಲಿ ಗೌವರ್ ಎಂದು ಶ್ಲಾಘಿಸಿದ್ದಾನೆ. ವರ್ತಕನ ಕಥೆಯ ಮುದುಕ ಜನವರಿ ಗೌವರ್‍ನ ವ್ಯಂಗ್ಯ ಚಿತ್ರವೆಂತಲೂ ಕೊಂಚ ಕಾಲ ಅವರಿಬ್ಬರೂ ಮನಸ್ತಾಪ ಉಂಟಾಗಿದ್ದಿತೆಂಬುದಕ್ಕೆ ಇದೇ ಸಾಕ್ಷಿಯೆಂತಲೂ ಒಂದು ಹೇಳಿಕೆ ಇದೆ. ಇದು ಪಾಕ್ಷಿಕ ಕಲ್ಪನೆ. ಸಲಿಗೆಯ ವಿನೋದ ಒಂದುಂಟೆಂಬುದನ್ನು ನೆನಪಿನಲ್ಲಿಡಬೇಕು.

	ನೀತಿಶಾಲಿ ಎಂಬ ಪದ ಗೌವರ್‍ನ ಕೃತಿಗಳಿಗೂ ಸಲ್ಲುತ್ತದೆ. ಈತನ ಮುಖ್ಯ ಕೃತಿಗಳು ಮೂರು - ಲ್ಯಾಟಿನ್ ಭಾಷೆಯ ವಾಕ್ಸ್ ಕ್ಲೆಮ್ಯಾಂಟಿಸ್ (10,000 ಸಾಲು), ಫ್ರೆಂಚ್‍ನ ಸ್ಪೆಕ್ಯುಲಂ ಮೆಡಿಟ್ಯಾಂಟಿಸ್ (20,000 ಸಾಲು)  ಮತ್ತು ಇಂಗ್ಲಿಷ್‍ನ ಕನ್‍ಫೆಸಿಯೋ ಅಮ್ಯಾಂಟಿಸ್ (34,000 ಸಾಲು). ಅನೇಕ ಶತಮಾನಗಳು ಅನುಪಲಬ್ಧವಾಗಿದ್ದ ಈತನ ಫ್ರೆಂಚ್ ಕೃತಿ 1895 ರಲ್ಲಿ ಕೇಂಬ್ರಿಜ್‍ನಲ್ಲಿ ಸಿಕ್ಕಿತು. ಮತಧರ್ಮದ ಭಾಷೆ, ನಾಗರಿಕ ಆಡಳಿತ ಭಾಷೆ, ಮತ್ತು ದೇಶೀಯ ಭಾಷೆ - ಮೂರರಲ್ಲೂ ಈತ ಕೃತಿರಚನೆ ಮಾಡಿರುವುದು ಗಮನಾರ್ಹ ಸಂಗತಿ. ಆಗ ದೇಶೀಯ ಭಾಷೆಯಾದ ಇಂಗ್ಲೀಷ್ ಗೆ ಆದ್ಯ ಸ್ಥಾನವಿರಲಿಲ್ಲ. ಮೂರರಲ್ಲೂ ಈತ ನೀತಿಭೋಧಕ ಕಿರುಗವನಗಳನ್ನೂ ರಚಿಸಿದ್ದಾನೆ. ಲ್ಯಾಟಿನ್ನಿನ ರಚನೆಗಳು ಬಹಳ ಮಟ್ಟಿಗೆ, ಎರಡನೆಯ ರಿಚರ್ಡನ ಆಳ್ವಿಕೆಯ ಅಸಂತುಷ್ಟಿ, 1381ರ ರೈತ ಚಳುವಳಿ ಮತ್ತು ಮುಂದೆ ಬರಲಿದೆಯೆಂದು ನಿರೀಕ್ಷಿಸಲಾಗಿದ್ದ, ನಾಲ್ಕನೆಯ ಹೆನ್ರಿಯ ಕಾಲದ, ಸುಖದಿನದ ವರ್ಣನೆಗಳಾಗಿವೆ. ಫ್ರೆಂಚ್‍ನಲ್ಲಿ ರೂಪುಗೊಂಡ ಕೃತಿ ವೈವಾಹಿಕ ಜೀವನ ಹಿರಿಮೆಯನ್ನು ಹೊಗಳುವ ಗಂಭೀರ ರಚನೆಯಾಗಿದೆ.

	ಇವನ ಕನ್‍ಫೆಸಿಯೊ ನಿಜಕ್ಕೂ ಬೃಹತ್ಕøತಿ ಕೂಡ. ಇವನ ಪಾಲಿಗೆ ಮಹತ್ಕøತಿ ಕೂಡ. ದೊರೆ ಎರಡನೆಯ ರಿಚರ್ಡನ ಅಪೇಕ್ಷೆಯಂತೆ ಇದನ್ನು ರಚಿಸಿದುದಾಗಿ ತಿಳಿಯ ಬರುತ್ತದೆ. ಕಾವ್ಯದ ಮುಮ್ಮಾತಿನಲ್ಲಿ, ಎಂದಿನಂತೆ ಕಾಲ ಕೆಟ್ಟಿತು, ಎಲ್ಲೆಲ್ಲೂ ಪಾಪ ತುಂಬಿತು, ಮುಂತಾಗಿ ಗೋಳಾಡಿ, ಸದ್ಯಕ್ಕಾದರೂ ಆ ವಿಷಯವನ್ನು ಬಿಟ್ಟು ಹೆಚ್ಚು ಆಹ್ಲಾದಕರವಾದ ಪ್ರೇಮದ ವಿಷಯಕ್ಕೆ ಬರೋಣವೆಂದು ಸಾರಿ ಕವಿ ಕಥೆಯನ್ನು ಪ್ರಾರಂಭಿಸುತ್ತಾನೆ. ಒಂದು ವಸಂತ ಪ್ರಾತಃಕಾಲದಲ್ಲಿ ಕವಿ ಯಾವುದೋ ಕವನಕ್ಕೆ ಹೋದಾಗ ಪ್ರೇಮದೇವತೆಗಳಾದ ಕ್ಯುಪಿಡ್ ಮತ್ತು ವೀನಸ್ ಎದುರಾದರಂತೆ. ಕ್ಯುಪಿಡ್ ಸುಮ್ಮನೆ ಹೊರಟು ಹೋಗಬೇಕೆಂದಿದ್ದರೂ ತನ್ನ ಆರಾಧಕನನ್ನು ಉಪೇಕ್ಷಿಸುವುದಕ್ಕೆ ಮನಸ್ಸಾಗದ ವೀನಸ್ ಇವನನ್ನು ಮಾತಾಡಿಸಿ ಆತ್ಮನಿವೇದನೆ ಮತ್ತು ಕ್ಷಮಾರ್ಜನೆಗೋಸ್ಕರ ಇವನನ್ನು ಜೀನಿಯಸ್ ಬಳಿಗೆ ಕಳಿಸಿದಳಂತೆ. ಆಗ ಜೀನಿಯಸ್ ಇವನಿಗೆ ಕೊಟ್ಟ ಉಪದೇಶದ ದೃಷ್ಟಾಂತ ಕಥೆಗಳೇ ಇದರ ತಿರುಳು. ಕೆಲವಕ್ಕೆ ಪ್ರಾಚೀನ ರೋಮನ್ ಕವಿ ಓವಿಡ್ ಆಧಾರ. ಉಳಿದವು ಆಗಿನ ಕಾಲದಲ್ಲಿ ಜನಜನಿತವಾಗಿದ್ದಂಥವು. ಕಾನ್ಸ್ಟೆನ್ಸ್ ಕಥೆ ಮತ್ತು ಯೋಧ ಫ್ಲಾರೆಂಟ್ ಕಥೆಗಳು ಚಾಸರನಲ್ಲಿ ಕ್ರಮಶಃ ನ್ಯಾಯಗಾರನ ಕಥೆ ಮತ್ತು ಬಾತ್ ಹೆಂಡತಿಯ ಕಥೆ ಎಂದಾಗುತ್ತದೆ. ಆದರೆ ಇವನು ಕಥನ ಕಲೆಯಲ್ಲಿ ಚಾರಸನ ಸಮಕ್ಕೆ ಹಾಗಿರಲಿ ಹತ್ತಿರಕ್ಕೂ ಬರಲಾರ. ಇಲ್ಲಿನ ಟೈರ್ ನಗರದ ಅಪೋಲೋನಿಯಸ್ ಮುಂದೆ ಷೇಕ್ಸಪಿಯರನ ಪೆರಿಕ್ಲೀಸ್‍ಗೆ ವಸ್ತುವನ್ನೊದಗಿಸಿತೆಂದು ಹೇಳಲಾಗಿದೆ. ಸ್ವಲ್ಪ ಕುತೂಹಲ ಕೆರಳಿಸಬಹುದಾದ ಕಥೆಯೆಂದರೆ ಕತ್ತಲು ಮತ್ತು ಗಾಳಿಗಳ ರಾಣಿ ಮೀಡಿಯ - ಒಂದೇ ಎನ್ನಿಸುತ್ತದೆ.

ಗೌವರ್ ಬೃಹತ್ಸಾಹಿತಿ ಹೌದು; ಆದರೆ ಇಂದಿನ ರುಚಿಗೆ ಒಗ್ಗುವುದು ಕಷ್ಟ; ತೀರ ನೀರಸ, ಮಂದ, ಭಾರ.													(ಆರ್.ಎನ್.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ